ನ್ಯೂಮನ್, ಪಾಲ್
	1925-. ಹಾಲಿವುಡ್ ನಟ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಹಾಯೋದಲ್ಲಿ ಮಧ್ಯವರ್ತಿ ದರ್ಜೆಯ ಕುಟುಂಬವೊಂದರಲ್ಲಿ ಜನಿಸಿದ. ತಂದೆ ಯಹೂದಿ ತಾಯಿ ಕ್ಯಾತೊಲಿಕ್, ಕ್ಲೀವ್‍ಲ್ಯಾಂಡ್‍ನಲ್ಲಿ ಕ್ರೀಡಾ ಸಾಮಗ್ರಿಯ ಮಾರಾಟಮಳಿಗೆಯೊಂದನ್ನು ತಂದೆ ಇಟ್ಟಿದ್ದರು. ಒಹಾಯೋದ ಕೆನ್ಯನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಭ್ಯಾಸ ಮಾಡಿದ. ಎರಡನೆಯ ಮಹಾಯುದ್ಧ ಕಾಲದಲ್ಲಿ ಪೆಸಿಫಿಕ್ ಸಾಗರ ಠಾಣೆಯಲ್ಲಿ ನೌಕಾ ಟಾರ್ಪೆಡೊ ವಿಮಾನಗಳ ರೇಡಿಯೊ ಆಪರೇಟರ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿದ. 1946ರಲ್ಲಿ ಊರಿಗೆ ಮರಳಿ ಕೆನ್ಯನ್ ಕಾಲೇಜಿನಲ್ಲಿ ನಾಟಕ ಕಲೆಯ ಅಧ್ಯಯನ ಆರಂಭಿಸಿದ. ತಂದೆಯ ಮರಣಾನಂತರ ಎರಡು ವರ್ಷ ಕ್ರೀಡಾಸಾಮಗ್ರಿ ಮಳಿಗೆಯನ್ನು ನಿಭಾಯಿಸಿದ. ಆಮೇಲೆ ಯೇಲ್ ವಿಶ್ವವಿದ್ಯಾಲಯದಲ್ಲಿ ನಾಟಕಶಾಲೆಯನ್ನು ಸೇರಿ ಅಧ್ಯಯನ ಮುಂದುವರಿಸಿದ. ಅಲ್ಲಿಂದ ನ್ಯೂ ಯಾರ್ಕಿಗೆ ತೆರಳಿ ಟೆಲಿವಿಷನ್ ಹಾಗೂ ರಂಗಭೂಮಿಯಲ್ಲಿ ಪ್ರವೇಶ ಪಡೆದ. ದಿ ವೆಬ್ ಹಾಗೂ ದಿ ಮಾಸ್ಕ್ ಇವನ ಟಿ.ವಿ.ಚಿತ್ರಗಳು. ಬ್ರಾಡ್‍ವೇ ನಾಟಕ ರಂಗದಲ್ಲಿ ಪಿಕ್‍ನಿಕ್ ಹಾಗೂ ಡೆಸ್ಪರೇಟ್ ಅವರ್ಸ್ ನಾಟಕಗಳಲ್ಲಿ ಅಭಿನಯಿಸಿದ. ಕ್ಷಿಪ್ರದಲ್ಲಿಯೇ ಹಾಲಿವುಡ್‍ನಿಂದ ಕರೆ ಬಂದಿತು. ವಾರ್ನರ್ ಚಿತ್ರಸಂಸ್ಥೆಯೊಂದಿಗೆ ಕರಾರು ಮಾಡಿಕೊಂಡ. 1955ರಲ್ಲಿ ತೆರೆಕಂಡ ದಿ ಸಿಲ್ವರ್ ಚಾಲಿಸ್ ಈತನ ಮೊದಲ ಚಿತ್ರ. 1956-57ರ ಅವಧಿಯಲ್ಲಿ ಎಂಜಿಎಂ ಸಂಸ್ಥೆಗಾಗಿ ದುಡಿದ. ಸಂಬಾಡಿ ಆಫ್ ದೇರ್ ಲೈಕ್ಸ್ ಮಿ(1956), ದಿ ರಾಕ್ (1956), ಅನ್‍ಟಿಲ್ ದೇ ಸೇ (1957), ಹೆಲನ್ ಮೋರ್ಗನ್ ಸ್ಟೋರಿ (1957)-ಇತ್ಯಾದಿ ಚಿತ್ರಗಳು ಆ ಕಾಲದವು. ಆಮೇಲೆ ಹಲವು ಸಂಸ್ಥೆಗಳ ಜೊತೆ ಕೆಲಸ ಮಾಡಿದ.

	ಚಿತ್ರಪ್ರದರ್ಶನ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಇವನ ಚಿತ್ರಗಳೆಂದರೆ ದಿ ಹಸ್ಲರ್ (1961), ಹಡ್ (1963), ಬುಚ್ ಕ್ಯಾಸಿಡಿ ಆ್ಯಂಡ್ ಸನ್‍ಡ್ಯಾನ್ಸ್‍ಕಿಡ್ (1969), ದಿ ಸ್ಟಿಂಗ್ (1974). 1969 ಹಾಗೂ 1970ರ ಅತಿ ಹೆಚ್ಚು ಹಣಗಳಿಕೆಯ ಚಿತ್ರತಾರೆಯರ ಪಟ್ಟಿಯಲ್ಲಿ ಈತನ ಹೆಸರು ಮೊದಲಿನದು. ಅತ್ಯಂತ ಹೆಚ್ಚು ಕಾಲ ಅಪಾರ ಜನಪ್ರಿಯನಾಗಿ ಉಳಿದು, ಅದ್ಭುತಯಶಸ್ಸುಗಳಿಸಿದ ಈ ನೀಲಿ ಕಣ್ಣಿನ ನಟನಿಗೆ ಆಸ್ಕರ್ ಪ್ರಶಸ್ತಿ ಬಾರದಿದ್ದರೂ ಐದು ಬಾರಿ ಆಸ್ಕರ್ ಪ್ರಶಸ್ತಿಗಾಗಿ ಇವನ ಹೆಸರು ಸೂಚಿತವಾಗಿದ್ದುದು ಇವನ ಅಭಿನಯ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಪ್ರಸಿದ್ಧ ಲಿಂಕನ್ ಸೆಂಟರ್ ಫಿಲ್ಮ್ ಸೊಸೈಟಿ ಇವನನ್ನು ಗೌರವಿಸಿದೆ.

	ಈತನ ಇತರ ಪ್ರಮುಖ ಚಿತ್ರಗಳೆಂದರೆ; ದಿ ಲಾಂಗ್ ಹಾಟ್ ಸಮ್ಮರ್ (1958), ದಿಯಂಗ್ ಫಿಲಡೆಲ್ಟಿಯನ್ಸ್(1959) ಎಕ್ಸೋಡಸ್(1960). ಪ್ಯಾರಿಸ್ ಬ್ಲೂಸ್ (1961). ಹೆಮಿಂಗ್ವೇಸ್ ಅಡ್ವೆಂಚರ್ಸ್ ಆಫ್ ಎ ಯಂಗ್ ಮ್ಯಾನ್ (1962), ದಿ ಪ್ರೈಜ್ (1963), ದಿ ಔಟ್ ರೇಜ್(1964), ಟೋರ್ನ್ ಕರ್ಟನ್ (1966), ದಿ ಸೀಕ್ರೆಟ್ ವಾರ್ ಆಫ್ ಹ್ಯಾರಿಫ್ರಿಗ್ (1968), ವಿನಿಂಗ್ (1969), ಸಮ್ ಟೈಮ್ಸ್ ಎ ಗ್ರೇಟ್ ನೋಷನ್ (1971), ಕಲರ್ ಆಫ್ ಮನಿ ಚಿತ್ರಕ್ಕೆ 1986ರಲ್ಲಿ ಅಕಾಡೆಮಿ ಅವಾರ್ಡ್ ಬಂದಿತು. ಬ್ಲೇಜ್ 1988, ಮಿಸ್ಟರ್ ಅಂಡ್ ಮಿಸಸ್ 1990, ಟ್ವೀಲೈಟ್ 1998 -ಇತ್ಯಾದಿ.

	ಇವನೇ ಒಂದು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾನೆ. ಈತನ ಪ್ರಥಮ ನಿರ್ದೇಶನದ ಸ್ವಂತ ಚಿತ್ರ ರೇಚಲ್ ರೇಚಲ್ (1979) ನ್ಯೂಯಾರ್ಕ್ ವಿಮರ್ಶಕರ ಉತ್ತಮ ನಿರ್ದೇಶನ ಪ್ರಶಸ್ತಿಯನ್ನು ಪಡೆದಿದೆ. ಈ ಚಿತ್ರದಲ್ಲಿ ಈತನ ಎರಡನೆಯ ಹೆಂಡತಿ ಜೋಹನ್ ವುಡ್‍ವರ್ಡ್ ಅಭಿನಯಿಸಿದ್ದಾಳೆ. 1958ರಲ್ಲಿ ಇವನನ್ನು ಮದುವೆಯಾದ ಜೋಹನ್ ಖ್ಯಾತ ತಾರೆ. ಆಸ್ಕರ್ ಪ್ರಶಸ್ತಿ ವಿಜೇತಳು. ಸಮ್‍ಟೈಮ್ಸ್ ಎ ಗ್ರೇಟ್ ನೋಷನ್(1971) ಚಿತ್ರದ ನಿರ್ದೇಶನದ ಹೊಣೆಯನ್ನು ವಹಿಸಿಕೊಂಡ. ಟೆಲಿವಿಷನ್‍ಗಾಗಿ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಚಿತ್ರವೊಂದರಲ್ಲಿ ತನ್ನ ಪತ್ನಿಯೊಂದಿಗೆ ನಟಿಸಿದ್ದಾನೆ. ಇತ್ತೀಚೆಗೆ ಚಿತ್ರರಂಗದಲ್ಲಿ ಆಸಕ್ತಿ ಕಡಿಮೆಯಾಗಿದೆ. ಕಾರು ಓಡಿಸುವಿಕೆ ಇವನಿಗೆ ಮೊದಲಿನಿಂದ ಬಂದ ಹವ್ಯಾಸ. ಈಗ ಹೆಚ್ಚು ಹೆಚ್ಚು ಕಾಲವನ್ನು ಕಾರ್ ರೇಸ್‍ಗಳಲ್ಲಿ ಕಳೆಯುತ್ತ ಕಾರು ಓಟದ ವೇಗದ ಹಲವು ದಾಖಲೆಗಳನ್ನು ಸ್ಥಾಪಿಸಿದ್ದಾನೆ. 1976ರ ಅಕ್ಟೋಬರ್‍ನಲ್ಲಿ ಅಟ್ಲಾಂಟಿಕ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಈತ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಿಸಿದ.

	ಸಾರ್ವಜನಿಕ ಕ್ಷೇತ್ರದಲ್ಲಿಯೂ ಈತ ದುಡಿದಿದ್ದಾನೆ. ರಾಜಕೀಯ ಧುರೀಣರಿಗಾಗಿ ಹಣಸಂಗ್ರಹ ಮಾಡಿದ್ದಾನೆ. ಸಾಮಾಜಿಕ ರಾಜಕೀಯ ಉದ್ದೇಶಗಳಿಗಾಗಿ ಚಳವಳಿ ನಡೆಸಿದ್ದಾನೆ. ಕ್ಯಾಲಿಫೋರ್ನಿಯಾದಲ್ಲಿ ಸಾಗರಜಲದಲ್ಲಿ ತೈಲ ಸಂಶೋಧನೆ ನಡೆಸುವುದರ ವಿರುದ್ಧ ಈತ ಚಳವಳಿ ಹೂಡಿದ್ದುಂಟು.

	ಈತನಿಗೆ ಮೊದಲ ಹೆಂಡತಿ ಜಾಕೇವಿಟ್ಟಿಯಿಂದ ಮೂರು ಮಕ್ಕಳು ಹಾಗೂ ಎರಡನೆಯ ಹೆಂಡತಿಯಿಂದ ಮೂರು ಮಕ್ಕಳು ಇದ್ದಾರೆ. 25 ವರ್ಷದ ಮಗ ಸ್ಕಾಟ್ ಕೂಡ ಚಿತ್ರನಟ.						(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ